ಕ್ರಾಸಿಟ್‍ಸ್ಕಿ, ಇಗ್ನಾಟ್ಸ್ ಕೌಂಟ್
1735-1801, 18ನೆಯ ಶತಮಾನದ ಪೋಲೆಂಡಿನ ಅತ್ಯಂತ ಹಿರಿಯ ಬರೆಹಗಾರನೆನಿಸಿಕೊಂಡ ಈತ ಹೆಸರಾಂತ ಕವಿ, ನಾಟಕಕಾರ ಮತ್ತು ಕಾದಂಬರಿಕಾರ. ಅರಸನ ಸ್ನೇಹ ಸಂಪಾದಿಸಿ ಬಿಷಪ್ ಮತ್ತು ಆರ್ಚ್‍ಬಿಷಪ್ ಆದ. ಈತನ ಅಣಕು ಮಹಾಕಾವ್ಯಗಳು ಉಲ್ಲಾಸ ಮನೋವೃತ್ತಿಯನ್ನೂ ನೀತಿಕಥೆಗಳು ಜೀವನದರ್ಶನವನ್ನೂ ವಿಡಂಬನೆಗಳು ಸಮಕಾಲೀನ ಜೀವನದ ಓರೆಕೋರೆಗಳನ್ನೂ ಚಿತ್ರಿಸುತ್ತವೆ. ಆದರೂ ಅವುಗಳಲ್ಲಿ ಎಲ್ಲಿಯೂ ಅಸಂಬದ್ಧತೆ ಕಾಣದು. ಈತನ ಬರೆಹ ಸೊಗಸಾದ ಪ್ರಾತಿನಿಧಿಕ ವ್ಯಕ್ತಿಗಳನ್ನೂ ಪ್ರಕಾರಗಳನ್ನೂ ಸೃಷ್ಟಿಸುವಂಥದು. ಪೋಲೆಂಡಿನ ಜನರ ಜೀವನವನ್ನು ಸುಂದರವಾಗಿ ಚಿತ್ರಿಸುವ ಎರಡು ಕಾದಂಬರಿಗಳನ್ನು ಈತ ಬರೆದ. ಪೋಲಿಷ್ ಭಾಷೆಯ ಆಧುನಿಕ ಕಾದಂಬರಿ ಸೃಷ್ಟಿಯಲ್ಲಿ ಈತ ಮೊದಲಿಗ. ಈತನ ಕೃತಿಗಳಲ್ಲಿ ಪ್ರಜ್ಞಾವಂತ ತರ್ಕಬದ್ಧ ಮನೋಭಾವ ಮತ್ತು ಪ್ರಾಚೀನ ಸಾಹಿತ್ಯ ಮನೋಧರ್ಮ ಎರಡನ್ನೂ ಗುರುತಿಸಬಹುದು. ಪ್ಲೂಟಾರ್ಕ್, ಲೂಸಿಅನ್ ಮೊದಲಾದ ಪ್ರಾಚೀನ ಕವಿಗಳ ಕೃತಿಗಳನ್ನು ಈತ ಅನುವಾದ ಮಾಡಿದ. ಪೋಲಿಷ್ ಭಾಷೆಯಲ್ಲಿ ಪ್ರಪಂಚ ಸಾಹಿತ್ಯ ಚರಿತ್ರೆಯ ಮೊದಲ ಸಮೀಕ್ಷೆ ನಡೆಸಿದ ಸಾಹಸಿಗನೀತ. ಬಾಯ್ಲೊ ನಿರೂಪಿಸಿದ ನಿಯಮಗಳನ್ನು ಅನುಸರಿಸಿ ಸಾಹಿತ್ಯ ರಚನೆಗೆ ತೊಡಗುವುದು ಮತ್ತು ಫ್ರಾನ್ಸಿನ ಮಹಾ ಕೃತಿಗಳನ್ನು ಅನುಕರಣೆ ಮಾಡುವುದು ಇವನ ಮತ್ತು ಇವನ ಸಂಗಡಿಗರ ಮುಖ್ಯ ಉದ್ದೇಶವಾಗಿತ್ತು.
	ಮೈಜೆóೈóಡ ಮತ್ತು ಮೊನಖೊಜೀನಿಯ-ಈ ಎರಡು ಇವನ ಪ್ರಸಿದ್ಧ ಕೃತಿಗಳು.			(ಎಲ್.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ